1991 ರ ಜನವರಿ ತಿಂಗಳಿನಲ್ಲಿ ನಟ ರತ್ನಾಕರ ಮಾಸ್ಟರ್ ಶ್ರೀ ಹಿರಣ್ಣಯ್ಯನವರು ತೀರ್ಥಹಳ್ಳಿಯಲ್ಲಿ ಮೊಕ್ಕಾಂ ಮಾಡಿದ್ದರು. ಅದೇ ಸಮಯಕ್ಕೆ ರಾಜ್ಯದಲ್ಲಿ ಬ್ರಾಹ್ಮಣ ಸಂಘಟನೆ ಬಗ್ಗೆ ವಿಚಾರ ವಿನಿಮಯ ನಡೆಯುತ್ತಾ ಇದ್ದು, ತೀರ್ಥಹಳ್ಳಿಯ ವಿಪ್ರ ಸಮಾಜಕ್ಕೂ ಸಂಘದ ಅವಶ್ಯಕತೆ ಇದೆ ಎಂದು ಮನಗೊಂಡವರು ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ರೀ ಎಂ ವೆಂಕಟೇಶ್ ರವರು, ಸ್ಥಳೀಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ವೈ.ಕೆ. ತಿಮ್ಮರಸಯ್ಯನವರ ಅಧ್ಯಕ್ಷತೆಯಲ್ಲಿ ಆಸಕ್ತರ ಒಂದು ಸಭೆಯನ್ನು ನಡೆಸಲಾಯಿತು. ಶ್ರೀ ಮಾಸ್ಟರ್ ಹಿರಣ್ಣಯ್ಯನವರು ಬ್ರಾಹ್ಮಣರ ಉಳಿವಿಗೆ, ರಕ್ಷಣೆಗೆ, ಬ್ರಾಹ್ಮಣ ಸಂಸ್ಕೃತಿಯ ಪ್ರಸಾರಕ್ಕೆ ಸಂಘದ ಅಗತ್ಯವನ್ನು ಸಭೆಗೆ ವಿವರಿಸಿದರು. ಇತರರು ನಮ್ಮನ್ನು ತುಳಿಯುವ ಮೊದಲು ನಾವು ಎಚ್ಚರಗೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ನಮ್ಮಲ್ಲಿ ಒಗ್ಗಟ್ಟು ಪೂರ್ಣವಾಗಿ ನಶಿಸಿದೆ. ಬ್ರಾಹ್ಮಣ ಸಂಸ್ಕೃತಿಯನ್ನು ಉಳಿಸಿ, ಪೋಷಿಸುವುದರ ಮೂಲಕ ಮಾತ್ರ ಸರ್ವೇ ಜನಾಃ ಸುಖಿನೋ ಭವಂತು ಎಂಬ ಆದರ್ಶ ಸಾಧಿಸ ಬಹುದು. ನಮ್ಮ ಸಂಘಟನೆ ಯಾರ ವಿರುದ್ಧವೂ ಅಲ್ಲ, ನಮ್ಮ ಕ್ಷೇಮಕ್ಕಾಗಿ ಎಂಬ ವಿಚಾರವನ್ನು ಮನ ಮುಟ್ಟುವಂತೆ ವಿವರಿಸಿದರು.
ಅದರ ಪರಿಣಾಮದಿಂದಾಗಿ 28/04/1991 ರ ಭಾನುವಾರ ಪಟ್ಟಣದ ಪುತ್ತಿಗೆ ಮಠದಲ್ಲಿ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಶ್ರೀಮದ್ ರಾಮಚಂದ್ರಾಪುರ ಮಠ ಅವರು ಸಂಘವನ್ನು ಉದ್ಘಾಟಿಸಿ ಅನುಗ್ರಹಿಸಿದರು. ಡಾ|| ಎಂ.ಇ. ರಂಗಾಚಾರ್ ಸಂಸ್ಕೃತ ಪ್ರಾಧ್ಯಾಪಕರು, ಶಿವಮೊಗ್ಗ ಇವರು ಬ್ರಾಹ್ಮಣ, ಬ್ರಾಹ್ಮಣ್ಯ, ಬ್ರಾಹ್ಮಣ ಕರ್ತವ್ಯಗಳು, ಬ್ರಾಹ್ಮಣ್ಯದ ರಕ್ಷಣೆ ಹೇಗೆ? ಸಂಘ ಏಕೆ ಬೇಕು, ಸನಾತನ ಧರ್ಮದ ರಕ್ಷಣೆಯ ಅವಶ್ಯಕತೆ ಏನು? ಮುಂತಾದ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ಅದೇ ದಿನ ಬೆಳಗ್ಗಿನ ಅಧಿವೇಶನದಲ್ಲಿ ಸಂಘ ಸ್ಥಾಪನೆ ಉದ್ದೇಶ, ಅದರ ರಚನೆ ಮತ್ತು ಕಾರ್ಯ ವಿಧಾನದ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ,ಸಂಘದ ಅಧಿನಿಯಮಗಳಿಗೆ ಅಂಗೀಕಾರ ನೀಡುವ ತಾಲ್ಲೂಕು ಸಮ್ಮೇಳನ ನಡೆಸಲಾಯಿತು. ತಾಲ್ಲೂಕು ಪ್ರತಿನಿಧಿಗಳ ಸಭೆಗೆ 67 ಸದಸ್ಯರನ್ನು ಆಯ್ಕೆ ಮಾಡಲಾಯಿತು. ತಾಲ್ಲೂಕಿನ ಸುಮಾರು 1000 ವಿಪ್ರರು ಶಿಸ್ತಿನಿಂದ ಈ ಎರಡೂ ಅಧಿವೇಶನದಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದರು.ದಿನಾಂಕ:- 30-03-1992 ರಂದು “ಬ್ರಾಹಣ ಸಂಘ ತೀರ್ಥಹಳ್ಳಿ ತಾ (ರಿ)” ಎಂಬ ಹೆಸರಿನಲ್ಲಿ ಬ್ರಾಹ್ಮಣ ಸಂಘವನ್ನು ನೋಂದಣಿ ಮಾಡಿಸಲಾಯಿತು. ಸಂಘವು ತನ್ನ ಅಧಿನಿಯಮದಲ್ಲಿ ಘೋಷಿಸಿದಂತೆ ಈ ಕೆಳಗಿನ ಉದ್ದೇಶ ಗಳನ್ನು ಹೊಂದಿರುತ್ತದೆ.
1) ಬ್ರಾಹ್ಮಣ ಸಮಾಜವನ್ನು ಸಂಘಟಿಸುವುದು.
2) ವಿದ್ಯಾರ್ಥಿ ನಿಲಯವನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು.
3) ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಅನುಕೂಲಕರ ಕಟ್ಟಡವನ್ನು ನಿರ್ಮಿಸುವುದು.
4) ಸಾಮೂಹಿಕ ಉಪನಯನ ಮತ್ತು ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವುದು.
5) ವಿಚಾರ ಸಂಕಿರಣ, ಉಪನ್ಯಾಸ, ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ಧ್ಯಾನ, ಪ್ರಾರ್ಥನೆ ಇವುಗಳನ್ನು ವ್ಯವಸ್ಥೆಮಾಡಲು ವಿಶಾಲ ಭವನವನ್ನು ಕಟ್ಟುವುದು.
6) ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ, ನಿಸ್ಸಹಾಯಕ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಧನ ಸಹಾಯಮಾಡುವುದು.
ಸಂಘದ ಪ್ರಾರಂಭದಿಂದ 2009 ರವರೆಗೆ, ಗೌರವಾಧ್ಯಕ್ಷರು, ಕಾರ್ಯಾಧ್ಯಕ್ಷರ ಹುದ್ದೆಗಳಿದ್ದು ಗೌರವಾಧ್ಯಕ್ಷರು ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಸಭೆಯ ಕಾರ್ಯಕಲಾಪಗಳನ್ನು ನಡೆಸುತ್ತಿದ್ದರು, ಕಾರ್ಯಾಧ್ಯಕ್ಷರು ಕಾರ್ಯಕಾರೀ ಸಭೆ ಹಾಗೂ ಇತರೆ ಸಮಾರಂಭಗಳ ಅಧ್ಯಕ್ಷತೆಯನ್ನು ವಹಿಸಿಕೊಂಡು ಸಭಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ನಮ್ಮ ಸಮಾಜದ ಗಣ್ಯರೂ, ಹಿರಿಯರಾದ ಶ್ರೀ ನೆಲ್ಲಿಸರ ಶ್ರೀನಿವಾಸರಾವ್ ರವರು ಗೌರವಾಧ್ಯಕ್ಷರಾಗಿ ಮತ್ತು ಶ್ರೀ ಎಂ ವೆಂಕಟೇಶ್, ಶ್ರೀ ಜಿ.ವಿ. ಮಂಜುನಾಥಯ್ಯ ಮತ್ತು ಶ್ರೀ ಕೆ.ವಿ. ಸತ್ಯನಾರಾಯಣರಾವ್ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಂಘಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿರುತ್ತಾರೆ. 2009 ರಲ್ಲಿ ಸಂಘದ ಬೈಲಾ ತಿದ್ದುಪಡಿಯಾಗಿದ್ದು, ಆಡಳಿತಾತ್ಮಕ ದೃಷ್ಠಿಯಿಂದ ಗೌರವಾಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ಹುದ್ದೆಯನ್ನು ರದ್ದು ಗೊಳಿಸಿ ಅಧ್ಯಕ್ಷರ ಹುದ್ದೆಯನ್ನು ಸೃಷ್ಠಿಸಲಾಯಿತು.
2015-16 ನೇ ಸಾಲಿನಲ್ಲಿ ಸಂಘದ ರಜತ ಮಹೋತ್ಸವ ವರ್ಷ. ರಜತ ಮಹೋತ್ಸವದ ಆಚರಣೆ ತಾಲ್ಲೂಕಿನ ವಿಪ್ರರಿಗೆಲ್ಲ ಬಹು ಹೆಮ್ಮೆಯ, ಅಭಿಮಾನದ, ಧನ್ಯತೆಯ ಕಾರ್ಯಕ್ರಮವಾಯಿತು. ಈ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಧಾರ್ಮಿಕ, ಸಾಂಸ್ಕೃತಿಕ , ಕೃಷಿ ವಿಚಾರ ಸಂಕಿರಣ, ಆರೋಗ್ಯ ಶಿಬಿರ, ವೃತ್ತಿ ಮಾರ್ಗದರ್ಶನ, ಮಹಿಳಾ ಯಕ್ಷಗಾನ ಪ್ರದರ್ಶನ, ಸೌಂದರ್ಯ ಲಹರೀ ಪಾರಾಯಣ ಮತ್ತು ಬಹು ಮುಖ್ಯವಾಗಿ ಗಾಯತ್ರೀ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಸಲಾಯಿತು. ರಜತ ಮಹೋತ್ಸವದ ನಿಮಿತ್ತ ನಡೆದ ಎಲ್ಲಾ ಕಾರ್ಯಕ್ರಮಗಳು ಬಹು ಯಶಸ್ವೀಯಾಗಿ ನಡೆಯಿತು.