ತಾಲ್ಲೂಕಿನ ಎಲ್ಲಾ ವಿಪ್ರ ಭಾಂಧವರು ಸಂಘದ ಕಾರ್ಯಕ್ರಮಗಳಲ್ಲಿ ಮತ್ತು ಆಡಳಿತದಲ್ಲಿ ಪಾಲ್ಗೊಳ್ಳಲು ಅವಕಾಶವಾಗುವಂತೆ ಹಾಗೂ ಸಂಘಕ್ಕೆ ನಿಸ್ವಾರ್ಥವಾಗಿ ಉದಾರ ದೇಣಿಗೆ ನೀಡಿದ ಮಹನೀಯರುಗಳು ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗುವಂತೆ ಈ ಕೆಳಕಂಡ ವ್ಯವಸ್ಥೆಯನ್ನು ಸಂಘದ ಬೈಲಾದಲ್ಲಿ ನಮೂದಿಸಿದಂತೆ, ಸಂಘದ ಪ್ರಾರಂಭದಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ.
1) ಶಾಶ್ವತ ಅಭಿವೃದ್ಧಿ ಸಮಿತಿ:- ಸಂಘ ಪ್ರಾರಂಭದಲ್ಲಿ ಆರ್ಥಿಕವಾಗಿ ಸದೃಡವಾಗಿ, ಬೆಳೆಯಲು ಶಾಶ್ವತ ಅಭಿವೃದ್ಧಿ ಸಮಿತಿಯ ಸದಸ್ಯರುಗಳೇ ಕಾರಣ ಎಂದರೆ ತಪ್ಪಾಗಲಾರದು. ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾದ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಅನುಕೂಲಕರ ಕಟ್ಟಡವನ್ನು ನಿರ್ಮಿಸುವುದು, ವಿಚಾರ ಸಂಕಿರಣ, ಉಪನ್ಯಾಸ, ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ಧ್ಯಾನ, ಪ್ರಾರ್ಥನೆ ಇವುಗಳನ್ನು ವ್ಯವಸ್ಥೆಮಾಡಲು ವಿಶಾಲ ಭವನವನ್ನು ಕಟ್ಟುವುದು ಸರ್ವರ ಅಭಿಪ್ರಾಯವಾಗಿದ್ದು, ಈ ಉದ್ದೇಶಕ್ಕೆ ಹಣದ ಅಗತ್ಯವಿದ್ದು ಸಮಾಜ ಭಾಂದವರಿಂದ ದೇಣಿಗೆ ಪಡೆಯುವುದು ಅನಿವಾರ್ಯವಾಗಿತ್ತು. ಸಂಘಕ್ಕೆ ಯಾವುದೇ ಆದಾಯದ ಮೂಲ ಇಲ್ಲದೇ ಇರುವ ಸಂದರ್ಭದಲ್ಲಿ ಶಾಶ್ವತ ಅಭಿವೃದ್ಧಿ ಸಮಿತಿ ಸದಸ್ಯರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉದಾರವಾಗಿ ದೇಣಿಗೆ ನೀಡಿ ಭದ್ರ ಬುನಾದಿಯನ್ನು ಹಾಕಿಕೊಟ್ಟಿರುತ್ತಾರೆ. ಸಾಮಾನ್ಯವಾಗಿ ಈ ಸಮಿತಿಯಲ್ಲಿ ಹಿರಿಯರು, ವಿವಿಧ ಕ್ಷೇತ್ರಗಳಲ್ಲಿ ಅನುಭವ ಪಡೆದವರು ಇರುವುದರಿಂದ ಸಂಘದ ಮೂಲ ಉದ್ದೇಶಕ್ಕೆ ಚ್ಯುತಿಯಾಗದಂತೆ ಸಕಾಲದಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು ಸಂಘದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಕಾಲ ಕಾಲಕ್ಕೆ ನಡೆಯುವ ಸಭೆಯಲ್ಲಿ ಭಾಗವಹಿಸಿ ಸಂಘಕ್ಕೆ ಸೂಕ್ತ ಸಲಹೆಗಳನ್ನು ನೀಡುತ್ತಾರೆ. ಸಂಘದ ಅಭಿವೃದ್ಧಿಯಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ. ಸದಸ್ಯರು ನೀಡಿದ ದೇಣಿಗೆ ಅನುಗುಣವಾಗಿ ಅವರುಗಳನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ.
ರೂಪಾಯಿ 25000/- ದೇಣಿಗೆ ನೀಡಿದವರು, ಪ್ರಧಾನ ಪೋಷಕರು, ರೂಪಾಯಿ 50000/-ಪ್ರಧಾನ ಮಹಾಪೋಷಕರು ಮತ್ತು ರೂಪಾಯಿ 100000/-ವಿಶೇಷ ಮಹಾಪೋಷಕರು ಎಂಬ ವರ್ಗಗಳನ್ನು ಮಾಡಿದ್ದು, ಈ ಸದಸ್ಯರು ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾಗುವ ಅರ್ಹತೆಯನ್ನು ಪಡೆದಿರುತ್ತಾರೆ.
ಅ) ಪ್ರಧಾನ ಪೋಷಕರ ವರ್ಗದಿಂದ 4 ಜನ ಸದಸ್ಯರು.
ಆ) ಪ್ರಧಾನ ಮಹಾಪೋಷಕರ ವರ್ಗದಿಂದ 3 ಜನ ಸದಸ್ಯರು.
ಇ) ವಿಶೇಷ ಮಹಾಪೋಷಕರ ವರ್ಗದಿಂದ 3 ಜನ ಸದಸ್ಯರು.
ತಾಲ್ಲೂಕು ಪ್ರತಿನಿಧಿಗಳು ಸಭೆಯಲ್ಲಿ 15 ಜನ ಸದಸ್ಯರನ್ನು ಕಾರ್ಯಕಾರೀ ಸಮಿತಿಗೆ ಚುನಾಯಿಸತಕ್ಕದ್ದು. ಒಟ್ಟು ಕಾರ್ಯಕಾರೀ ಸಮಿತಿಯ ಸದಸ್ಯರ ಸಂಖ್ಯೆ 25 ಆಗಿರುತ್ತದೆ. ಸರ್ವಸದಸ್ಯರ ಸಭೆ ನಡೆದ 10 ದಿನಗಳ ಒಳಗೆ ಸಭೆ ಸೇರಿ ಕಾರ್ಯಕಾರೀ ಸಮಿತಿಯ ರಚನೆ ಮಾಡತಕ್ಕದ್ದು. ಕಾರ್ಯಕಾರೀ ಸಮಿತಿಯಲ್ಲಿ ಒಬ್ಬ ಅಧ್ಯಕ್ಷರು, ಹೋಬಳಿಗೆ ಒಬ್ಬರಂತೆ 5 ಜನ ಉಪಾಧ್ಯಕ್ಷರು, ಒಬ್ಬರು ಪ್ರಧಾನ ಕಾರ್ಯದರ್ಶಿಯವರು, ಒಬ್ಬರು ಕೋಶಾಧಿಕಾರಿಯವರು, 3ಜನ ಕಾರ್ಯದರ್ಶಿಗಳು ಮತ್ತು 14 ಜನ ಸದಸ್ಯರು ಇರತಕ್ಕದ್ದು.